ಬಾಲ್ಕನ್ ಪರ್ಯಾಯ ದ್ವೀಪ		
ಆಲ್ಬೇನಿಯಾ, ಗ್ರೀಸ್, ಬಲ್ಗೇರಿಯಾ ಯೂರೊಪಿಗೆ ಸೇರಿದ ತುರ್ಕಿ ಪ್ರದೇಶ ಮತ್ತು ಯೂಗೊಸ್ಲಾವಿಯಾದ ಬಹುಭಾಗಗಳಿಂದ ಕೂಡಿದ ಬಾಲ್ಕನ್ ಪರ್ಯಾಯದ್ವೀಪ. ಇದು ಯೂರೊಪಿನ ಆಗ್ನೇಯ ದಿಕ್ಕಿನಲ್ಲಿ ಉತ್ತರ ಅಕ್ಷಾಂಶ 440 ಯಿಂದ 360 ಮತ್ತು ಪೂರ್ವ ರೇಖಾಂಶ 180 ಯಿಂದ 280 ನಡುವೆ ವ್ಯಾಪಿಸಿದೆ. ಈ ಪ್ರದೇಶದ ವಿಸ್ತೀರ್ಣ ಸುಮಾರು 5.51.700 ಚ. ಕಿಮೀ. ಬಲ್ಗೇರಿಯಾ ಹಾಗೂ ಯುಗೊಸ್ಲಾವಿಯಾದ ಬಾಲ್ಕನ್ ಬೆಟ್ಟಸಾಲುಗಳಿಂದ ಈ ಪ್ರದೇಶಕ್ಕೆ ಬಾಲ್ಕನ್ ಎಂಬ ಹೆಸರು ಬಂದಿದೆ. ತುರ್ಕಿ ಭಾಷೆಯಲ್ಲಿ ಬಾಲ್ಕನ್ ಎಂದರೆ ಬೆಟ್ಟ. ಇಲ್ಲಿ ಅನೇಕ ಯುದ್ಧಗಳು ಆರಂಭವಾದುದರಿಂದ ಇದನ್ನು ಯೂರೋಪಿನ ಸಿಡಿಮದ್ದಿನ ಪಿಪಾಯಿ (ದಿ ಪೌಡರ್ ಕೆಗ್ ಆಫ್ ಯೂರೊಪ್) ಎಂದು ಕರೆಯಲಾಗಿದೆ.

ಬಾಲ್ಕನ್ ಪರ್ಯಾಯ ದ್ವೀಪದ ಪೂರ್ವದಲ್ಲಿ ಏಜಿಯನ್ ಮತ್ತು ಕಪ್ಪುಸಮುದ್ರ, ದಕ್ಷಿಣದಲ್ಲಿ ಮೆಡಿಟರೇನಿಯನ್ ಸಮುದ್ರ, ಪಶ್ಚಿಮದಲ್ಲಿ ಏಡ್ರೀಯಾಟಿಕ್ ಮತ್ತು ಅಯೋನಿಯನ್ ಸಮುದ್ರಗಳು ಸುತ್ತುವರಿದಿವೆ, ರುಮೇನಿಯಾ ಭೌಗೋಳಿಕವಾಗಿ ಈ ಪರ್ಯಾಯದ್ವೀಪದ ಅಂಗವಾಗಿರದಿದ್ದರೂ ಅಲ್ಲಿಯ ಇತಿಹಾಸ ಮತ್ತು ರಾಜಕೀಯಗಳಲ್ಲಿ ಪ್ರಧಾನ ಪಾತ್ರ ನಿರ್ವಹಿಸಿದ ಕಾರಣದಿಂದಾಗಿ ಅದನ್ನೂ ಬಾಲ್ಕನ್ ದೇಶವೆಂದು ಪರಿಗಣಿಸಲಾಗಿದೆ.

ಈ ಪರ್ಯಾಯದ್ವೀಪದ ಬಹುಭಾಗ ಬೆಟ್ಟಗಾಡು ಪ್ರದೇಶ. ಯೂಗೊಸ್ಲಾವಿಯೂ ಪೂರ್ವಗಡಿಯಿಂದ ಆರಂಭವಾಗಿ ಮಧ್ಯ ಬಲ್ಗೇರಿಯ ಮೂಲಕ ಪೂರ್ವಾಭಿಮುಖವಾಗಿ ಬಾಲ್ಕನ್ ಬೆಟ್ಟಸಾಲು ಹಬ್ಬಿದೆ. ಇತರ ಬೆಟ್ಟಸಾಲುಗಳಲ್ಲಿ ಪಶ್ಚಿಮ ಯೂಗೊಸ್ಲಾವಿಯಾದ ಆಲ್ಬೇನಿಯನ್ ಅಲ್ಪ್‍ಸ್, ಡೈನರಿಕ್ ಆಲ್ಪ್‍ಸ್. ಮಧ್ಯಗ್ರೀಸಿನ ಪಿಂಡನ್, ದಕ್ಷಿಣ ಬಲ್ಗೇರಿಯದ ರೊಡೋಪ್ ಮುಂತಾದವು ಮುಖ್ಯವಾದವು. ಈ ಭಾಗಗಳಲ್ಲಿ ಅರಣ್ಯಾವಲಂಬಿತ ಕೈಗಾರಿಕೆಗಳೇ ಹೆಚ್ಚು.. ದ್ವೀಪದ ಉತ್ತರದಲ್ಲಿ ಡಾನ್ಯೂಬ್, ಕೂಪಾ ಹಾಗೂ ಸಾವಾ ಮುಂತಾದ ನದಿಗಳಿವೆ. ಡಾನ್ಯೂಬ್ ನದಿ ಬಾಲ್ಕನ್ ಜನರಿಗೆ ಪ್ರಮುಖ ಜಲಮಾರ್ಗ. ಮೊರಾವಾ. ಬಾರ್ದಾರ್, ಮೆಸ್ತಾ ಹಾಗೂ ಸ್ಟ್ರೂಮಾ ಇತರ ಮುಖ್ಯ ನದಿಗಳು. ಮ್ಯಾಂಗನೀಸ್, ತಾಮ್ರ, ಸೀಸ ಮುಂತಾದ ಖನಿಜಗಳು ದೊರೆಯುತ್ತವೆ.

ಅರುವತ್ತಾರು ದಶಲಕ್ಷಕ್ಕೂ ಹೆಚ್ಚು ಜನ ವಾಸಿಸುವ ಈ ಪರ್ಯಾಯದ್ವೀಪದಲ್ಲಿ ಆಲ್ಬೇನಿಯನ್ನರು, ಗ್ರೀಕರು, ರುಮೇನಿಯನ್ನರು, ಸ್ಲಾವರು (ಬಲ್ಗೇರಿಯನ್ಸ್ ಕ್ರೋಟ್ಸ್, ಮ್ಯಾಸಿಡೋನಿಯನ್ಸ್, ಸರ್ಬ್ ಹಾಗೂ ಸ್ಲೋವನ್ಸ್) ಮತ್ತು ತುರ್ಕಿ ಜನರಿದ್ದಾರೆ. ಬಹುಪಾಲು ಜನ ಈಸ್ಟರ್ನ್ ಆರ್ಥೊಡಾಕ್ಸ್ ಚರ್ಚಿಗೆ ಸೇರಿದವರು. ಕೆಲವು ರೋಮನ್ ಕ್ಯಾಥೊಲಿಕರೂ ಮತ್ತೆ ಕೆಲವು ಮುಸ್ಲಿಮರೂ ಇದ್ದಾರೆ. ಬಹುಪಾಲು ಜನ ರೈತವರ್ಗಕ್ಕೆ ಸೇರಿದವರು.

ಕ್ರಿ.ಪೂ. ಸು. 148ರಿಂದ ಐದು ಶತಮಾನಗಳಿಗೂ ಹೆಚ್ಚು ಕಾಲ ಬಾಲ್ಕನ್ ಪರ್ಯಾಯದ್ವೀಪ ರೋಮನ್ ಸಾಮ್ರಾಜ್ಯಕ್ಕೆ ಸೇರಿತ್ತು. ಕ್ರಿ.ಶ. ಸು. 6ನೆಯ ಶತಮಾನದ ಆರಂಭದ ದಶಕಗಳಲ್ಲಿ ಸ್ಲಾವ್ ಜನರು ಇಲ್ಲಿಗೆ ಬಂದು ನೆಲಸಿದರು 14ನೆಯ ಶತಮಾನಾಂತ್ಯದ ವೇಳೆಗೆ ಈ ಪ್ರದೇಶದ ಬಹುಭಾಗ ಒಟ್ಟೋಮನ್ (ತುರ್ಕಿ) ಸಾಮ್ರಾಜ್ಯಕ್ಕೆ ಸೇರಿತ್ತು. 19ನೆಯ ಶತಮಾನದ ಮೊದಲ ದಶಕಗಳಲ್ಲಿ ಬಾಲ್ಕನ್ ಜನರಲ್ಲಿ ರಾಷ್ಟ್ರೀಯಪ್ರಜ್ಞೆ ಜಾಗೃತವಾಗಿ ತುರ್ಕರಿಂದ ಸ್ವತಂತ್ರರಾಗುವ ಪ್ರಯತ್ನ ನಡೆಸಿದರು. ತುರ್ಕಿಯ ರಾಜ್ಯಾಡಳಿದಲ್ಲಿ ತಲೆಹಾಕುತ್ತಿದ್ದ ಯೂರೊಪಿನ ಕೆಲರಾಷ್ಟ್ರಗಳು ತಮ್ಮ ಸ್ವಾರ್ಥಕ್ಕಾಗಿ ಬಾಲ್ಕನ್ ರಾಷ್ಟ್ರೀಯ ಹೋರಾಟಕ್ಕೆ ಉತ್ತೇಜನ ನೀಡಿದುವು. 1821 ರಿಂದ 1908ರ ಅವಧಿಯಲ್ಲಿ ಗ್ರೀಸ್, ಮಾಂಟೆನಿಗ್ರೊ ಸರ್ಬಿಯಾ, ರುಮೇನಿಯಾ ಮತ್ತು ಬಲ್ಗೇರಿಯಾ ಸ್ವತಂತ್ರವಾದುವು. 1878ರ ಬರ್ಲಿನ್ ಕಾಂಗ್ರೆಸ್ ಮಾಂಟೆನಿಗ್ರೊ ರುಮೇನಿಯಾ ಮತ್ತು ಸರ್ಬಿಯಾ ದೇಶಗಳ ಸ್ವಾತಂತ್ರ್ಯಕ್ಕೆ ಮಾನ್ಯತೆ ನೀಡಿತು. ಬಾಲ್ಕನ್ ಯುದ್ಧಗಳು (ನೋಡಿ- ಬಾಲ್ಕನ್-ಯುದ್ಧಗಳು) ನಡೆಯುವವರೆಗೂ ಮ್ಯಾಸಿಡೋನಿಯಾ ಮತ್ತು ಆಲ್ಬೇನಿಯಾ ತುರ್ಕಿಯ ಆಧೀನದಲ್ಲಿ ಉಳಿದುವು.	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
		*